ಇಸಬೆಲ (ಸ್ಪೇನಿನ)
1451-1504. ಸ್ಪೇನಿನ ಕ್ಯಾಸ್ಟೈಲ್ ಮತ್ತು ಲಿಯಾನ್ ಭಾಗಗಳ ರಾಣಿ. ಮೊದಲನೆಯ ಇಸಬೆಲ ಅಥವಾ ಇಸಬೆಲ ದಿ ಕೆಥೊಲಿಕ್ ಎಂದು ಹೆಸರು. ಈಕೆ ಕ್ಯಾಸ್ಟೈಲಿನ 2ನೆಯ ಜಾನನ ಮಗಳು. ಜಾನ್ ಅಫ್ ಗಾಂಟ್‍ನ ವಂಶದವಳು. ಆರಿವಲ್ಸ್‍ನಲ್ಲಿ ವಿದ್ಯಾಭ್ಯಾಸ ಪಡೆದಳು. ಈಕೆಯನ್ನು ಮದುವೆಯಾಗಲು ಅನೇಕ ರಾಜಪುತ್ರರು ಆಸೆಪಡುತ್ತಿದ್ದರು. ಈ ಸ್ಪರ್ಧಿಗಳಲ್ಲಿ ಪೋರ್ಚುಗಲ್ಲಿನ ಅಲ್ಬಾನ್ ಸೊûೀ ಪೆಡ್ರೂಜಿರಾನ್ ಮತ್ತು ಆರೆಗಾನಿನ ಫರ್ಡಿನೆಂಡ್ ಮುಖ್ಯರು. ಕೊನೆಗೆ 1469ರಲ್ಲಿ ಆರೆಗಾನಿನ ಫರ್ಡಿನೆಂಡನನ್ನು ಮದುವೆಯಾದಳು. ಕ್ರಾಂತಿಕಾರರ ಮುಖಂಡರಿಂದ ಬಂದ ಕ್ಯಾಸಟೈಲಿನ ಸಿಂಹಾಸನವನ್ನೇರಲು ಒಪ್ಪದ ಇವಳನ್ನು ಇವರ ಸಹೋದರ 4ನೆಯ ಹೆನ್ರಿ 1468ರಲ್ಲಿ ತನ್ನ ಉತ್ತರಾಧಿಕಾರಿಯೆಂದು ಅಂಗೀಕರಿಸಿದ. 1474ರಲ್ಲಿ 4ನೆಯ ಹೆನ್ರಿಯ ಮರಣಾನಂತರ ಇಸಬೆಲ ಕ್ಯಾಸ್ಟೈಲ್ ಮತ್ತು ಲಿಯಾನ್‍ಗಳ ರಾಣಿಯಾದಳು.	

	ಇಲ್ಲಿಂದ ಮುಂದೆ ಸ್ಪೇನ್ ಯೂರೋಪಿನಲ್ಲೆಲ್ಲ ಬಲಯುತವೂ ಸಂಪದ್ಯುಕ್ತವೂ ಆದ ರಾಜ್ಯವಾಯಿತು. ಇದಕ್ಕೆ ಇಸಬೆಲಳ ವಿವೇಕ, ದೃಢನಿಶ್ಚಯ, ಉತ್ಸಾಹಶಕ್ತಿ ಮತ್ತು ನಿಸ್ವಾರ್ಥದೇಶಾಭಿಮಾನಗಳು ಕಾರಣವಾಗಿದೆ. ಪೀಟರ್ ಮಾರ್ಟಿರ ಡಿ ಆಂಘೀರ್ ಎಂಬಾತನಿಗೆ ಆಶ್ರಯದಾತಳಾಗಿಯೂ ಪ್ಯಾಲೆಸ್ ಸ್ಕೂಲ್ ಎಂಬುದರ ಸ್ಥಾಪಕಳಾಗಿಯೂ ಸ್ಪೇನಿನಲ್ಲಿ ವಿದ್ಯೆಗೆ ಪ್ರೋತ್ಸಾಹವಿತ್ತಳು. ಕ್ಯಾಸ್ಟೈಲಿಗೆ ಇನ್‍ಕ್ವಿಸಿಷನ್ (ನೋಡಿ- ಇನ್‍ಕ್ವಿಸಿಷನ್) ನ್ಯಾಯಾಲಯವನ್ನು ಬರಮಾಡಿಕೊಳ್ಳಲು ಮತ್ತು ಯೆಹೂದ್ಯರನ್ನು ದೇಶದಿಂದ ಹೊರದೂಡಲು ಇವಳು ಅನೇಕ ಪ್ರಯತ್ನಗಳನ್ನು ಮಾಡಿದಳು.

	ಜಿನೋವದ ಸಾಹಸಿ ನಾವಿಕ ಕ್ರಿಸ್ಟೊಫರ್ ಕೊಲಂಬಸನಿಗೆ ಸಮುದ್ರಯಾನ ಮಾಡಲು ಇವಳು ಉತ್ಸಾಹದಿಂದ ಮುಂದೆ ಬಂದು ಧನಸಹಾಯ ಮಾಡಿದ್ದು ಸ್ತುತ್ಯರ್ಹವಾದದ್ದು. ಅದರಿಂದಲೇ ಕೊಲಂಬಸನ ಅದ್ಭುತ ಸಾಹಸಕ್ಕೆ ಒಂದು ಅವಕಾಶವಾಯಿತು.

	ತನ್ನ 30ವರ್ಷಗಳ ಆಳ್ವಿಕೆಯ ಅನಂತರ ಮೆಡಿನ ಡೆಲ್ ಕ್ಯಾಂಪೊ ಎಂಬಲ್ಲಿ ಇಸಬೆಲ ಮೃತಳಾದಳು.

(ಎ.ಎಚ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ